ಶುಕ್ರವಾರ, ಆಗಸ್ಟ್ 2, 2013

ಮತ್ತೇಕೆ ನನ್ನತ್ತ ನೋಡುವೆ....... !

ಮತ್ತೇಕೆ ನನ್ನತ್ತ ನೋಡುವೆ 
ಇನ್ನೇನೂ ಉಳಿದಿಲ್ಲ 
ನೋವಲ್ಲಿ ಸದಾ ಕುಗ್ಗುತ್ತಿರುವ 
ಹಾಳಾದ ಮನವ ಬಿಟ್ಟು 

ನಿನ್ನೆದೆಯಲ್ಲಿ ನನ್ನ ನಾ 
ಹುಡುಕಲು ಹೋಗಿ 
ಸೋತು ಸೋತು 
ಪರಿತಪಿಸಿದ ನೆನಪುಗಳಾ ಬಿಟ್ಟು 

ಪ್ರತಿ ಬಾವನೆಗಳಿಗೆ ನೀ 
ಎರಚಿದ ಮಸಿಯ ಕಲೆಗಳಲ್ಲಿ 
ಮಂಕಾಗಿ ಗುಟುಕ ಒಲವಿಗಾಗಿ 
ಕಾತರಿಸಿತ್ತಿರುವ ಕಂಗಳಾ ಬಿಟ್ಟು 

ಬಿಟ್ಟು ಸಾಗುವೆನೆಂಬ ನಿನ್ನ 
ಮಾತುಗಳ ಚಾಟಿಯೇಟಿಗೆ 
ಚೇತರಿಕೆ ಕಾಣದಿರುವ 
ನನ್ನ ಒಡೆದ ಹೃದಯವಾ ಬಿಟ್ಟು..... 

               
                                                  ರಮ್ಯ. ಜೆ 
ಬರಬಹುದೇ ಮತ್ತೆ ಮಳೆ

ಎಂದಿಗೂ ಬಾರದ ಕಾಲವಾ 
ಕಾಯುವ ಹುಂಬಳು  ನಾನು,
ಮತ್ತೆ ಕಾಯುತ್ತಿರುವೆ 
ನೀ ಅರ್ಧಕ್ಕೆ ಬಿಟ್ಟು ಹೋದ 
ಕನಸುಗಳ ಪೂರ್ಣಗೊಳಿಸಲು 

ಕನಸೆಂದು ತಿಳಿದಿದೆ 
ಮತ್ತೆ ಉಸಿರಾಡುವುದೆಂಬ 
ಕನವರಿಕೆಯೂ  ಕಾದಿದೆ 
ಬಿಟ್ಟಿ ಸಾಗುವ ದೈರ್ಯ 
ಯಾಕೋ ಬಾರದಿದೆ 


ಬರಬಹುದೇ ಮತ್ತೆ ಮಳೆ 
ಮನದ ಬೆಂಗಾಡಲ್ಲಿ 
ಮೂಡಬಹುದೇ ನಿನ್ನೆದೆಯಲ್ಲಿ 
ನನ್ನೋಡಲ ಒಲವು
ಕಳೆದ ವಸಂತ ಗೀತೆಯಂತೆ ...... 

                                                   ರಮ್ಯ. ಜೆ